ತುಂತುರುಕಾರಿ		

ದ್ರವಗಳ ಸೂಕ್ಷ್ಮ ತುಂತುರುಗಳನ್ನು ಉತ್ಪತ್ತಿ ಮಾಡುವ ಒಂದು ಸಲಕರಣೆ. (ಆ್ಯಟಮೈಸರ್). ಕಣಿತ್ರ ಎಂಬುದು ಪರ್ಯಾಯ ನಾಮ. ತುಂತುರುಗಳನ್ನು ಉತ್ಪತ್ತಿ ಮಾಡುವ ವಿಧಾನಕ್ಕೆ ತುಂತುರೀಕರಣ ಇಲ್ಲವೇ ಕಣೀಕರಣ ಎಂಬ ಹೆಸರುಗಳಿವೆ. 

ಚಿತ್ರ-1

ಐದು ಬಗೆಯ ತುಂತುರುಕಾರಿಗಳನ್ನು ಇಲ್ಲಿ ವಿವರಿಸಿದೆ. 1 ಕಿರಿ ರಂದ್ರ ತುಂತುರುಕಾರಿ: ಕಿರಿ ರಂಧ್ರವಿರುವ ನಳಿಕೆ ಇದರ ಮುಖ್ಯ ಘಟಕ. (ಚಿತ್ರ 1). ನಳಿಕೆಯ ರಂಧ್ರದ ಮೂಲಕ ಒತ್ತಡದಿಂದ ದ್ರವವನ್ನು ಹಾಯಿಸಿದಾಗ ತುಂತುರು ಉತ್ಪತ್ತಿಯಾಗುತ್ತದೆ. ರಂಧ್ರದ ವಿನ್ಯಾಸ ಮತ್ತು ದ್ರವದ ಒತ್ತಡಗಳ ಮೇಲೆ ತುಂತುರೀಕರಣ ಅವಲಂಬಿಸಿದೆ. ಇಂಥ ತುಂತುರು ಪ್ರವಾಹದಲ್ಲಿ ಬೇರೆ ಬೇರೆ ಗಾತ್ರಗಳ ತುಂತುರು ಹನಿಗಳಿರುವುವು. ಪ್ರವಾಹದ ಮಧ್ಯದಲ್ಲಿರುವ ಹನಿಗಳು ದೊಡ್ಡವಾಗಿಯೂ ಹೊರವಲಯದಲ್ಲಿರುವವು ಚಿಕ್ಕದಾಗಿಯೂ ಇರುತ್ತವೆ. ದ್ರವ ಮತ್ತು ನಳಿಕೆಯ ರಂಧ್ರದ ಅಂತರದಲ್ಲಿ ನಡೆಯುವ ಅಂತರಕ್ರಿಯೆಯೇ ಇದಕ್ಕೆ ಕಾರಣ. ರಂಧ್ರದ ಒಳಮೈ ಸಲೆ ಮತ್ತು ಹೊರಬರುವ ದ್ರವದ ಪರಿಮಾಣ ಪ್ರಮಾಣ ದ್ರವ-ರಂಧ್ರ ಅಂತರಕ್ರಿಯೆಯನ್ನು ನಿರ್ಧರಿಸುವುವು. ದ್ರವ ಪ್ರವಾಹ ತುಂತುರಾಗಿ ಮಾರ್ಪಡುವಾಗ ಉಂಟಾಗುವ ಕ್ರಿಯೆ ಬಲು ತೊಡಕಾದದ್ದು. ಲಾರ್ಡ್ ರೈಲೆಯ ಪ್ರಕಾರ ಸ್ತಂಭಕೃತಿಯಲ್ಲಿರುವ ದ್ರವವು ಮೇಲ್ಮೈ ಕರ್ಷಣ ಬಲಗಳಿಂದ (ಸರ್ಫೇಸ್ ಟೆರ್ನಶನ್ ಫೋರ್ಸ್) ಅಸ್ಥಿರ ಸ್ಥಿತಿಯಲ್ಲಿರುವುದರಿಂದ ತುಂತುರಾಗಿ ಛಿದ್ರಗೊಳ್ಳುತ್ತದೆ. ಅನಂತರ ಈ ಹನಿಗಳು ನಡುಭಾಗದೊಂದಿಗೆ ಅಂತರಕ್ರಿಯೆ ನಡೆಸಿ, ಪುನಃ ಒಡೆದು ಇನ್ನೂ ಸೂಕ್ಷ್ಮ ತುಂತುರಾಗಿ ಮಾರ್ಪಡುತ್ತವೆ.  ಅದರಂತೆ, ಕಿರಿದಾದ ರಂಧ್ರದ ಮೂಲಕ ಹಾಯುವ ದ್ರವವು ರಂಧ್ರದ ಕೊನೆಯಲ್ಲಿ ಸ್ತಂಭಾಕೃತಿಯಲ್ಲಿರುತ್ತದೆ. ಈ ಸ್ಥಿತಿ ಅಸ್ಥಿರವಾದುದರಿಂದ ಛಿದ್ರಗೊಂಡು ತುಂತುರಾಗಿ ಹೊರಬರಬಹುದು.

ಚಿತ್ರ-2

	2 ಸುರುಳಿ ರಂಧ್ರ ತುಂತುರುಕಾರಿ: ಇದರ ರಂದ್ರದ ಒಳಮೈಯಲ್ಲಿ ಸುರುಳಿಯಾಕಾರದ ಅಚ್ಚುಗಳಿರುವುದರಿಂದ ಇದರ ಮೂಲಕ ಒತ್ತಡದಿಂದ ಹಾಯುವ ದ್ರವ ತುಂತುರಾಗಿ ಮಾರ್ಪಟ್ಟು ಶಂಕುವಿನ ಆಕಾರದ ತುಂತುರು ಪ್ರವಾಹ ಹೊರಚಿಮ್ಮುತ್ತದೆ. ಈ ಮಾದರಿಯ ತುಂತುರುಕಾರಿಗಳನ್ನು ಅನಿಲ ತಿರುಬಾನಿಗಳಲ್ಲಿ ಮತ್ತು ದಹನಕೋಷ್ಟಗಳಲ್ಲಿ ಬಳಸಲಾಗುವುದು.

	3 ಅಪಕೇಂದ್ರ ತುಂತುರುಕಾರಿ: ಅತಿ ವೇಗದಿಂದ (ಮಿನಿಟಿಗೆ ಸುಮಾರು 60,000 ಸುತ್ತು) ಗಿರಕಿಸುತ್ತಿರುವ ಒಂದು ತಟ್ಟೆಯ ಮೇಲೆ ದ್ರವವನ್ನು ಬೀಳುವಂತೆ ಮಾಡಿದಾಗ, ಅಪಕೇಂದ್ರ ಬಲ ದ್ರವವನ್ನು ತಟ್ಟೆಯ ಅಂಚಿನ ಬಳಿ ಹೋಗುವಂತೆ ನಿಯೋಜಿಸುತ್ತದೆ.  ಇಲ್ಲಿ ದ್ರವ ಹಾಳೆಯಾಕಾರದಲ್ಲಿದ್ದು ಅಂಚಿನಿಂದ ಹೊರಹಾಕುವಾಗ ಛಿದ್ರವಾಗಿ ತುಂತುರಿನಂತೆ ಚಿಮ್ಮುತ್ತದೆ. (ಚಿತ್ರ 3). ಹೊರಚಿಮ್ಮುವ ಹನಿಗಳ ಗಾತ್ರ ತಟ್ಟೆ ಆವರ್ತಿಸುವ ವೇಗದ ಮೇಲೆ ಅವಲಂಬಿಸಿದೆ.  ಎಲ್ಲ ಹನಿಗಳ ಗಾತ್ರವೂ ಸಾಮಾನ್ಯವಾಗಿ ಒಂದೇ ಆಗಿರುವುದು. ಇಂಥ ತುಂತುರುಕಾರಿಗಳನ್ನು ಕೊಪ್ಪರಿಗೆ ಕುಲುಮೆ (ಬಾಯಿಲರ್ ಫರ್ನೇಸ್) ಮತ್ತು ತುಂತುರು ಶುಷ್ಕೀಕರಣಗಳಲ್ಲಿ (ಸ್ಪ್ರೇ ಡೈಯಿಂಗ್) ಬಳಸಲಾಗುವುದು.

ಚಿತ್ರ-3

	4 ದ್ರವದ ಎರಡು ಸರಳುಗಳು ರಭಸದಿಂದ ಒಂದಕ್ಕೊಂದು ಅಪ್ಪಳಿಸಿದಾಗ ತುಂತುರು ಉತ್ಪತ್ತಿಯಾಗುತ್ತದೆ. (ಚಿತ್ರ 4). ಈ ತಂತ್ರವನ್ನು ಅಗ್ನಿಶಾಮಕ ಕಾರ್ಯದಲ್ಲಿ ಅಳವಡಿಸಲಾಗುವುದು.

ಚಿತ್ರ-4

	5 ದ್ರವ-ಅನಿಲ ಅಂತರಕ್ರಿಯಾ ತುಂತುರುಕಾರಿ: ಎಲ್ಲ ಮಾದರಿಯವುಗಳಿಗಿಂತ ದ್ರವ-ಅನಿಲ ಅಂತರಕ್ರಿಯಾ ತುಂತುರುಕಾರಿಗಳು ಹೆಚ್ಚು ಬಳಕೆಯಲ್ಲಿವೆ. ಇವು ಬರ್ನೂಲಿ ಪ್ರಮೇಯ ತತ್ತ್ವವನ್ನು ಆಧರಿಸಿವೆ. ಇದರ ಪ್ರಕಾರ ದ್ರವ ಅನಿಲಗಳ ವೇಗ ಅಧಿಕವಾಗಿರುವ ಎಡೆಗಳಲ್ಲಿ ಒತ್ತಡ ಕಡಿಮೆ ಇರುವುದು.  ಸಮತಲದಲ್ಲಿರುವ ಒಂದು ನಳಿಕೆಯ ಮೂಲಕ ಹರಿಯುತ್ತಿರುವ ನಾನಾ ರೂಪದ ಶಕ್ತಿಗಳ ಮೊತ್ತ ನಿಯಮವಾಗಿರುತ್ತದೆ. ಅಂದರೆ ಠಿ/ಠಿ+1/2 v2 = ನಿಯತಾಂಕ. ಇಲ್ಲಿ ಠಿ, ಠಿ, v ಅನುಕ್ರಮವಾಗಿ ದ್ರವದ ಒತ್ತಡ ಸಾಂದ್ರತೆ ಮತ್ತು ವೇಗ. ಒತ್ತಡ ಮತ್ತು ವೇಗಗಳು ಒಂದು ಕ್ಷಣಿಸಿದಾಗ ಮತೊಂದು ವೃದ್ಧಿಸುತ್ತದೆ ಎಂಬುದನ್ನು ಈ ಸಮೀಕರಣದಿಂದ ಗಮನಿಸಬಹುದು. ಅಂದರೆ ಅವು ಪರಸ್ಪರ ವ್ಯಸ್ತಾನುಪಾತದಲ್ಲಿವೆ. ಆದ್ದರಿಂದ ಅನಿಲಗಳಲ್ಲಿ ಅಥವಾ ದ್ರವಗಳಲ್ಲಿ ಕಡಿಮೆ ಒತ್ತಡ ಬಿಂದುಗಳು ಅಧಿಕ ವೇಗವಿರುವ ಬಿಂದುಗಳಾಗಿರುವವು ಅಥವಾ ಕಡಿಮೆ ವೇಗವಿರುವ ಬಿಂದುಗಳು ಅಧಿಕ ಒತ್ತಡವಿರುವ ಬಿಂದುಗಳಾಗಿರುವವು.

	ಚಿತ್ರ (5) ರಲ್ಲಿನ ಖಿ ಕೊಳವೆಯ ಮೂಲಕ ವಾಯುವನ್ನು ಒತ್ತಡದಿಂದ ಹಾಯಿಸಿದಾಗ (ರಬ್ಬರಿನ ಬಿರಡೆಯನ್ನು ಅಥವಾ ರೇಚಕವನ್ನು ಬಳಸಿ) ವಾಯು ಅಧಿಕ ವೇಗದಿಂದ ಕಿರಿದಾದ ರಂದ್ರದ ಮೂಲಕ ಹೊರನುಗ್ಗುವುದು. ಅಂದರೆ 0 ಬಿಂದುವಿನಲ್ಲಿ ವಾಯುವಿನ ವೇಗ ಹೆಚ್ಚಹಾಗಿರುತ್ತದೆ.  ಆದ್ದರಿಂದ ಆ ಬಿಂದುವಿನಲ್ಲಿ ಒತ್ತಡ ವಾತಾವರಣ ಒತ್ತಡಕ್ಕಿಂತ ಕಡಿಮೆ ಇರುವುದು. 

ಚಿತ್ರ-5

0 ಬಿಂದು ನೇರವಾಗಿ, ದ್ರವದಲ್ಲಿ ಅದ್ದಿರುವ ಲಂಬ ಕೊಳವೆಯ ಮೇಲೆಯೇ ಇರುವುದರಿಂದ ವಾತಾವರಣ ಒತ್ತಡ ದ್ರವವನ್ನು 0 ಬಿಂದುವಿಗೆ ಕಳುಹಿಸಲು ಪ್ರೇರೇಪಿಸುತ್ತದೆ. 

ಚಿತ್ರ-6

ಹೀಗೆ ದ್ರವ ಬಿಂದುವನ್ನು ತಲುಪಿದಾಗ ರಭಸದಿಂದ ಮುನ್ನುಗ್ಗುತ್ತಿರುವ ವಾಯುವಿನ ಪ್ರವಾಹ ಅದರೊಂದಿಗೆ ಅಂತರ ಕ್ರಿಯೆ ನಡೆಸಿ ತುಂತುರನ್ನು ಉಂಟುಮಾಡುತ್ತದೆ. ಚಿತ್ರ (6) ಮತ್ತು (7) ರಲ್ಲಿ ವಿವಿಧ ಮಾದರಿಯ ದ್ರವ-ಅನಿಲ ಅಂತರ ಕ್ರಿಯಾ ತುಂತುರುಕಾರಿಗಳನ್ನು ಕಾಣಬಹುದು.

ಚಿತ್ರ-7

 ಇಂಥ ತುಂತುರುಕಾರಿಗಳನ್ನು ಗಂಟಲಿನ ಔಷಧಿಯನ್ನು ಸಿಂಪಡಿಸುವಲ್ಲಿ, ಸುಗಂಧ ದ್ರವ್ಯಗಳನ್ನು ಸಿಂಪಡಿಸುವಲ್ಲಿ, ವೈಜ್ಞಾನಿಕ ಪ್ರಯೋಗಗಳಲ್ಲಿ, ಪೆಟ್ರಲ್ ಯಂತ್ರಗಳ ಕಾಬ್ರ್ಯುರೇಟರುಗಳಲ್ಲಿ, ಬಣ್ಣವನ್ನು ಹೊಡೆಯುವ ಯಂತ್ರಗಳಲ್ಲಿ ಮತ್ತು ಕೊಪ್ಪರಿಗೆ ಕುಲುಮೆಗಳಲ್ಲಿ ಉಪಯೋಗಿಸಲಾಗುವುದು.													(ಸಿ.ಟಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ